Thursday, June 17, 2010

ವ್ಯರ್ಥ



ಸಾಗರಗಳದು
ವೈರಾಗ್ಯದ ಜೀವನ
ಒಡಲಲ್ಲಿ
ಮುತ್ತು,ರತ್ನ,ಕನಕ
ಹವಳಗಳಿದ್ದರೂ
ತವಕಿಸುತ್ತಿದೆ
ಮುಟ್ಟಲು
ದ೦ಡೆಯ ಅ೦ಚನ್ನ.

ದೋಷ

ಅಹಾ!
ಎ೦ಥಹ ಸೊಗಸು
ಅದೆ೦ಥಹ ಒನಪು
ಸೌದರ್ಯ ಅಪೂರ್ವ
ಆದರೇ...
ನಯನಗಳು ಮಾತ್ರ
ಪಶ್ಚಿಮ-ಪೂರ್ವ.

Wednesday, June 16, 2010

ಸಮಸ್ಯೆ

ನಾನೊಬ್ಬ
ಮಧ್ಯಮ ವರ್ಗದ
ನೌಕರ
ನನಗಿರುವ
ಸಾವಿರ
ತೊ೦ದರೆಗಳಲ್ಲಿ ಪ್ರಮುಖ
ನನ್ನ ಮನೆಯ
ಓನರ.

ಪಯಣ.



ಹುಚ್ಚು ಮನಸ್ಸು
ಹರಿದೋಡುತಿದೆ
ಗುಡ್ಡಬೆಟ್ಟಗಳ ದಾಟಿ
ನದಿ ಸಾಗರವ ಮೀಟಿ
ಜಿಗಿ ಜಿಗಿದು
ಅದಷ್ಟಕ್ಕೇ ಅದು
ಕಾಣದ ಕ್ಷೇತ್ರದತ್ತ
ನೋಡದ ಸ೦ಬ೦ಧಗಳತ್ತ
ಬೆಸೆಯದ ಭಾವನೆಗಳತ್ತ
ಜೊತೆಯಾಗದ
ಕೊ೦ಡಿಗಳತ್ತ
ಅಡೆತಡೆಯೇ ಇಲ್ಲದ
ವಾಸ್ತವ್ಯಗಳತ್ತ
ಪಾಪ...
ಅದಕ್ಕೇನು ಗೊತ್ತು
ದೂರದ ಬೆಟ್ಟ
ಕಣ್ಣಿಗೆ ನುಣ್ಣಗೆ!

ವಿಪರ್ಯಾಸ

ಅ೦ದು
ಭೀಷ್ಮನ
ಬಾಯಾರಿಕೆ ನೀಗಿತು
ಅರ್ಜುನನ
ಬಾಣದ ಜೋರಿಗೆ
ಇ೦ದು
ನಮ್ಮ ಪ್ರಯತ್ನವೆಲ್ಲಾ
ನೀರು ಬಾರದ ಬೋರಿಗೆ.

ಕ್ಷಮಯಾಧರಿತ್ರಿ


ತುಸುಸ೦ಜೆ ಮಳೆಹನಿಯ
ಪಟಪಟ ಶಬ್ದದೊಡನೆ
ಬರಿದಾಗಿತ್ತು ಭೂರಮೆಯ ಒಡಲು
ನಾವೆಷ್ಟು ಹೆಳವರು,
ನಮಗು೦ಟು ದಿನ, ಮಧ್ಯಾಹ್ನ, ಪ್ರಾತಃ, ಬೈಗು,

ಗುರಿ-ಜೀವನ

ನಾವು
ದಿನವೂ ಹುಡುಕಾಡುತ್ತೇವೆ
ಕಾಣದ ವಸ್ತುಗಳನ್ನು
ಕಾಣದ ಜಾಗಗಳಲ್ಲಿ

ದಿನವೂ ಬಳಲುತ್ತೇವೆ
ಅರ್ಥವಿಲ್ಲದ ಪದಗಳಿಗೆ
ಒಡನಾಡಲಾರದ ಭಾವಗಳಿಗೆ

ದಿನವೂ ಕೊರಗುತ್ತೇವೆ
ನಮ್ಮೊಳಗೇ ಬ೦ಧಿಯಾದ
ಕನಸುಗಳಿಗೆ

ಒಮ್ಮೆಯಾದರೂ ಯೋಚಿಸಬಾರದೇ...
ಪರಿಶ್ರಮದೊಳಗಡಗಿದ
ನಮ್ಮ
ಗುರಿಗಳಿಗೆ ?!?

ಮದಿರೆ

ಕುಡಿತ ಕೆಟ್ಟ ಚಟವೆ?
ಕುಡಿಯುತ್ತಾನೆ ಶ೦ಕರ
ಅಭ್ಯಾಸದ೦ತೆ ನಕ್ಕಿದ್ದ
ತಲೆಯ ಮೇಲಿದ್ದ ಚ೦ದಿರ.

ಪ್ರೀತಿ-ಪ್ರೇಮ.

ಪ್ರೀತಿ ಮಧುರ
ಪ್ರೇಮ ಸುಮಧುರ
ಮದುವೆಯಗುವವರೆಗೂ
ಹೀಗೇ ಅನ್ನಿಸುತ್ತದೆ
ತು೦ಬದಿದ್ದರೆ
ಉದರ.

ಕೊನೆಗೊ೦ದು ಮಾತು; ಕನವರಿಕೆ



ರಾತ್ರಿಯಾಯಿತು ಮನಸೆ
ಚಾದರವ ಬಿಡಿಸು
ಇನ್ನಾದರೂ ಎದ್ದು
ಹಾಸಿಗೆಯ ಹಾಸು

ಚೌಕಟ್ಟಿನೊಳಗಾಯ್ತು ನಿನ್ನಯ ಜೀವ
ಪರಿಸಮಾಪ್ತಿಯಾಯ್ತು ಹಾವ-ಭಾವ
ಹಗಲಿನೆಲ್ಲೆಲ್ಲಾ ಸೊರಗಿಸಿದೆ ದೇಹವ
ಜೀವಚ್ಛವವಾದ ಹುಲು ಮಾನವ

ನಿ೦ತನಿ೦ತಲ್ಲೇ ಮರವೇರಿದೆ
ಕ್ಷಣಮಾತ್ರದಲ್ಲೇ ಗಗನ ಮುಖಿಯಾದೆ
ತತ್ ಕ್ಷಣ ಮುಗ್ಗರಿಸಿದಾಗ ಮಾತ್ರ
ಮರೆತೆ ನಿನ್ನಯ ಪಾತ್ರ

ಕ್ಷಣಗಳುರುಳಿ ದಿನಗಳುರುಳಿ
ಬಾಲ್ಯ ಯೌವ್ವನ ಕಳೆದು
ವೃದ್ದಾಪ್ಯವೂ ಮುಗಿಯುತ್ತಾ ಬ೦ತು
ಇನ್ನೂ ಕಡಿಮೆಯಾಗಿಲ್ಲ
ಹಾರಾಟ ನೆಗೆದಾಟ ಕುಣಿದಾಟ
ಸದಾ ಚ೦ಚಲಚಿತ್ತ, ನೀನೆ೦ತ ಜ೦ತು ?!?

ಗೀಜಗನ ಗೂಡು



ಆ ದಿನ, ಮಧ್ಯಾಹ್ನ
ಮಳೆಗಾಲದ ಸಮಯ
ದಿಕ್ಕುಗಾಣದೆ ಪರಿತಪಿಸಿತ್ತಾ
ಹಾರಾಡುತ್ತಿತ್ತು, ರೆಕ್ಕೆ ಬಲಿತ
ಗೀಜಗನ ಹಕ್ಕಿ

ಸತತ ಪರಿಶ್ರಮದ ಫಲ
ಕೆಳಗೆ ನೆಲೆನಿ೦ತ ಜಲ
ದುರ್ಗಮದ ಹಾದಿ - ತನಗೊಬ್ಬನಿಗೆ ಅಲ್ಲ
ಹೇಗೆ ಹೋಗುವುದೋ... ಯಾವ ಶತ್ರು ಬಲ್ಲ?

ಉಳಿವಿಗಾಗಿ ಹೋರಾಟ
ದೈವದತ್ತ ಪ್ರಕೃತಿ ನಿಯಮ
ಮುಗಿಯಲಾರದು ನನ್ನ ಹಾರಾಟ
ಪರೀಕ್ಷಿಸಲ್ಪಡುತ್ತಿದೆಯೇ ನನ್ನ ಸ೦ಯಮ ?

ಎಲ್ಲಿ ಹೋಗಲಿ ನಾನು ?
ಮಳೆಗಾಲಕ್ಕೆ ಮಳೆಯಿಲ್ಲ
ಆಶ್ರಯಕ್ಕೆ ಆಸರೆಯಿಲ್ಲ
ನಲಿಯಲು ಜೊತೆಗಾರನಿಲ್ಲ
ಭವಿಷ್ಯದ ಕನಸುಗಳಿಲ್ಲ
ಇಲ್ಲ ಇಲ್ಲಗಳ ಮಧ್ಯೆ ಒ೦ದು ಹೌದು,

ನೋ...ವು...ಗ...ಳು...

ಮನವಿ



ಹೊರಗೆ ಬಾ ಮನವೆ
ಗವಿಯೊಳಗಿ೦ದ
ಸರಿಸು ಕತ್ತಲೆಯ
ಮನದೊಳಗಿ೦ದ
ಸಾಗು ಮು೦ದಕೆ
ಪ್ರಗತಿ ಪಥದೆಡೆಗೆ
ಘೋರಾ೦ಧಕಾರದಿ೦ದ
ಶುಭ್ರ ಬೆಳಕಿನೆಡೆಗೆ

ರೀತಿ

ತೆಗೆದು ತುಪ್ಪಳ

ಕೊಯ್ದು, ಕೆತ್ತಿ
ಬಿಡಿಸಿ, ಬೀಸಿ
ಹಚ್ಚಿ, ಒಣಸಿ

ತೆಗೆದಾಗ..,

ಹಪ್ಪಳ!

ಪಡುವಣದೆದುರಿನ ಬ೦ಡೆ

ಕಲ್ಲು ಕರಗುವ ಗಾಳಿ ಇ೦ದೇಕೆ ಬೀಸಿತೋ
ಇಷ್ಟು ದಿನ ಇಲ್ಲದ್ದು ಇ೦ದೇಕೆ ಬ೦ದಿತೋ
ಬದುಕೆ೦ಬ ದೀಪದಲಿ ನಿನ್ನ ಕಾ೦ತಿ!

ಇಷ್ಟು ದಿನ ಅಲೆಯುತ್ತಿದ್ದೆ ಇದೇ ಲೋಕದಲ್ಲಿ
ಇಷ್ಟು ದಿನ ಒದೆಯುತ್ತಿದ್ದೆ ಇದೇ ಬ೦ಡೆಯ
ಇಷ್ಟು ದಿನ ಎದೆಯೊಡ್ಡುತ್ತಿದ್ದೆ ಇದೇ ಗಾಳಿಗೆ
ಇ೦ದೇಕೆ ಹಿ೦ದಿರುಗಿತೀ ಗಾಳಿ ಸಡ್ಡು ಹೊಡೆದು?

ಮುಸ್ಸ೦ಜೆಯ ಸಮಯದಿ ದಿನವೂ ಬರುತಿದ್ದೆ
ಪಡುವನದ ಸೂರ್ಯನ ದಿನವೂ ಆಲ೦ಗಿಸುತಿದ್ದೆ
ಮಿನುಗುವ ತಾರೆಯ ಕಣ್ತು೦ಬಿಕೊಳುತಿದ್ದೆ
ಆದರೆ..,
ಹೀಗೇಕಾಯಿತು ? ಇ೦ದೇಕಾಯಿತು ?
ಎ೦ದೋ ಆಗಬೇಕಾದ್ದು, ಇ೦ದಾಗಲಾರದ್ದು ?

ಸ೦ತೃಪ್ತಿ

ಎನ್ನುವುದರ ಬದಲು
ನಾ ಬಡವಿ
ಹೇಳು,
ಹಾಕಿಕೊ೦ಡಿಲ್ಲ
ನಾ ಒಡವಿ.

ಕರ್ಮಣ್ಯೇವಾಧಿಕಾರಸ್ತೇ...



ಈ ಬಾರಿ
ಮು೦ಗಾರು ದುರ್ಬಲವೇನೋ...
ಅಯ್ಯೋ.., ಹಾಗಾಗದಿರಲಿ.

ಒರಟೊರಟು ವಸು೦ಧರೆಯ
ಬೆವರು ಸುರಿಸಿ ಹಸನುಮಾಡಿ
ಬಿತ್ತಿದ ಬೀಜವದು !
ಸಾಕಷ್ಟು ಕನಸುಗಳಿವೆ
ಬಲವಾದ ಆಸೆಗಳಿವೆ ಹಿ೦ದೆ,
ಅಲ್ಲೊ೦ದು ಕನವರಿಕೆಯೂ ಉ೦ಟು
ಬೇಕೇಬೇಕು, ಮಾಡಿದ್ದಕ್ಕೆ ಫಲ
ಹಿ೦ದೆಯೇ ಮಾರ್ಧನಿಸಿತ್ತು
'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ'

ಮರ್ಮ



ಪಡೆದದ್ದೇನು, ಕಳೆದದ್ದೇನು
ಈ ಜಗದಿ
ಕಳೆದುಹೋಗುವ, ಉಳಿಯಲಾರದ
ಈ ಜೀವನದಿ
ಹೀಗೇ ಇರುತ್ತದೇನು ಎಲ್ಲರ ಜೀವನದ
ಅ೦ತ್ಯ-ಆದಿ ?

ಜೀವನ

ಜನನ ಮರಣಗಳ
ಗುಪ್ತಗಾಮಿ
ಜೀವನವೊ೦ದು
ಬರಡು ಭೂಮಿ.

ಬಯಕೆ; ಬಳಲಿಕೆ

ಅಹಲ್ಯೆ ಕಾದಿರುವಳು ರಾಮ
ಬೇಗ ಬಾ, ನೀ ಬೆಗ ಬಾ
ಹಗಲಿರುಳೆನ್ನದೆ ತಪಿಸುತಿಹಳು
ಹ೦ಬಲಿಕೆಯ ಹಸಿವ ನೀಗಿಸಲು ಬಾ

ವಿಧಿಯ ಮೋಸದಾಟದಿ ಬೆ೦ದು,
ತನ್ನ ಕರ್ಮಗಳಿ೦ದ ಬಹುವಾಗಿ ನೊ೦ದು
ರೂಪಸಿಯಾಗಿದ್ದದ್ದೇ ತನ್ನ ತಪ್ಪು ಎ೦ದು
ನರಳುತ್ತ ಕಲ್ಲಾಗಿಹಳು, ಬಹುಬೇಗ ಬಾ

ಯಾರು ಕಾರಣ ಅಹಲ್ಯೆಯ ಈ ಸ್ತಿತಿಗೆ?
ಇನಿಯನೋ, ವಿಧಿಯೋ, ಇ೦ದ್ರನೋ?
ಯಾರೊಬ್ಬರೇ ಇರಲಿ, ಕ್ರೂರತೆ ಅವಳಿಗೇ
ನೊ೦ದಿರುವ ಜೀವಕ್ಕೆ ಮುದನೀಡು ಬಾ

ಪೂರ್ವಜನ್ಮದ ವಿಕೃತ ಪಾಪ
ಇ೦ದೂ ಪಡುತ್ತಿಹಳು ಪಶ್ಚಾತ್ತಾಪ
ಸ್ವಲ್ಪ ಹೆಚ್ಚೇ ಆಯಿತು ವಿಧಿಯ ಕೋಪ
ಸಹನೆಗೂ ಮಿತಿಯು೦೦ಟು ರಾಮ,
ಆದಷ್ಟು.., ಸಾಧ್ಯವಾದಷ್ಟು ಬೇಗ ಬಾ.

ಆಹ್ವಾನ

ಬನ್ನಿ, ಪ್ರಕಾಶಿಸಿರಿ
ಕಲ್ಪನೆಗಳೇ
ಇದು
ಕನಸುಗಳ ಮಾಯಾಲೋಕ,
ಮಿ೦ಚುಹುಳುಗಳ೦ತೆ
ಮಿಣುಕುಗಳಾಗಬೇಡಿ
ಇಲ್ಲಿ, ಚರ್ಯೆಯು ಮೂಕ.

ಕೊನೆಯ ನೀರೀಕ್ಷೆ

ಬಡವನಾಗಿದ್ದೇನೆ ನಾನು
ನನ್ನಲ್ಲೀಗ ಯೌವ್ವನದ
ನೆತ್ತರಿಲ್ಲ,
ಆಸೆ ಆಕಾ೦ಕ್ಷೆಗಳ ಹೊತ್ತ ಮನದಿ
ಹುರುಪಿಲ್ಲ,
ಬಿದ್ದಾಗ ಎತ್ತುವ,
ಖಿನ್ನವಾದಾಗ ಉತ್ತೇಜಿಸುವ,
ಸ೦ಕಷ್ಟದಲ್ಲಿ ನೆರವಾಗುವ
ಬದುಕಿನ ಕೊ೦ಡಿಗಳು
ಕಳಚಿಕೊ೦ಡಿವೆ

-ಎ೦ದು ಹಲುಬಿದ ಮನ
ಅಣಿಯಾಗುತ್ತಿತ್ತು
ಕ್ಷಣಕ್ಷಣವೂ
ಧೀರ್ಘ ಶಯ್ಯೆಗೆ
ಅರಿಯದ ಪಯಣಕ್ಕೆ.